ಕೊಳ್ಳೇಗಾಲ

ಮೈಸೂರು ಜಿಲ್ಲೆಯ ಪೂರ್ವಭಾಗದ ಒಂದು ತಾಲ್ಲೂಕು. ಆ ತಾಲ್ಲೂಕಿನ ಮುಖ್ಯಸ್ಥಳ, ತಾಲ್ಲೂಕು ಉ. ಅ. 110 46'-120 18' ಮತ್ತು ಪೂ. ರೇ. 760 59'-770 47' ನಡುವೆ ಹಬ್ಬಿದೆ. ಇದರ ವಾಯವ್ಯ, ಉತ್ತರ ಮತ್ತು ಪೂರ್ವದ ಅಂಚುಗಳಲ್ಲಿ ಕಾವೇರಿ ನದಿ ಹರಿಯುತ್ತದೆ. ಕಾವೇರಿಯ ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳೂ ಶಿವಸಮುದ್ರವೂ ಇರುವುದು ಕೊಳ್ಳೇಗಾಲಕ್ಕೆ ವಾಯುವ್ಯದಲ್ಲಿ. ಕೊಳ್ಳೇಗಾಲದ ವಿಸ್ತೀರ್ಣ 1,076 ಚ.ಮೈ. ತಾಲ್ಲೂಕಿನಲ್ಲಿ 122 ಹಳ್ಳಿಗಳಿವೆ. ಕೊಳ್ಳೇಗಾಲವೊಂದೇ ಪಟ್ಟಣ. ಕೊಳ್ಳೇಗಾಲ ತಾಲ್ಲೂಕು ಮೊದಲು ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಅದನ್ನು ಮೈಸೂರು ಜಿಲ್ಲೆಗೆ ಸೇರಿಸಲಾಯಿತು. 
ಕೊಳ್ಳೇಗಾಲ ತಾಲ್ಲೂಕು ಮೈಸೂರು ಪ್ರಸ್ಥಭೂಮಿಯ ಒಂದು ಭಾಗ, ಪೂರ್ವ ಘಟ್ಟಗಳ ದಕ್ಷಿಣದ ಕವಲುಗಳು ತಾಲ್ಲೂಕಿನಲ್ಲಿ ಹಬ್ಬಿವೆ. ಕೊಳ್ಳೇಗಾಲದ ಪಶ್ಚಿಮಕ್ಕಿರುವ ಬಿಳಿಗಿರಿರಂಗನ ಬೆಟ್ಟ ಈ ಕವಲುಗಳಲ್ಲಿ ಒಂದು. ಇದು ಕೊಳ್ಳೇಗಾಲವನ್ನು ಚಾಮರಾಜನಗರ ತಾಲ್ಲೂಕಿನಿಂದ ಪ್ರತ್ಯೇಕಿಸಿದೆ. ತಾಲ್ಲೂಕಿನ ಪೂರ್ವದಲ್ಲಿರುವ ಬೆಟ್ಟಗಳಲ್ಲಿ ಮಹದೇಶ್ವರ ಬೆಟ್ಟ ಮುಖ್ಯವಾದ್ದು. ಕೊಳ್ಳೇಗಾಲದ ವಾಯುಗುಣ ಒಟ್ಟಿನಲ್ಲಿ ಮೈಸೂರು ಜಿಲ್ಲೆಯದಕ್ಕಿಂತ ಭಿನ್ನವಾಗಿಲ್ಲ. ಮಳೆಯ ವಾರ್ಷಿಕ ಸರಾಸರಿ 35". ತಾಲ್ಲೂಕಿನ ಸುಮಾರು ಅರ್ಧ ಭಾಗ ಕಾಡುಗಳಿಂದ ಕೂಡಿದೆ. ಜನರ ಮುಖ್ಯ ಕಸಬು ಕೃಷಿ. ರೇಷ್ಮೆ ವ್ಯವಸಾಯವೂ ನಡೆಯುತ್ತದೆ. ಆಲಂಬಾಡಿ ತಳಿಯ ದನ ಪ್ರಸಿದ್ಧವಾಗಿದೆ.

ತಾಲ್ಲೂಕಿನ ಆಡಳಿತ ಕೇಂದ್ರವಾದ ಕೊಳ್ಳೇಗಾಲ ಪಟ್ಟಣ ಉ. ಅ. 120 10' ಮತ್ತು ಪೂ. ರೇ .770 7'ದಲ್ಲಿದೆ. ಜನಸಂಖ್ಯೆ 28,171 (1971). ಇದು ರಾಜ್ಯದ ರೇಷ್ಮೆ ಕೈಗಾರಿಕೆಯ ಒಂದು ಕೇಂದ್ರ. ಇಲ್ಲಿಯ ಜರತಾರಿ ಬಟ್ಟೆಗಳು ಹಿಂದಿನಿಂದಲೂ ಪ್ರಸಿದ್ಧವಾಗಿವೆ. ಪ್ರಥಮ ಪದವಿಯವರೆಗೆ ಶಿಕ್ಷಣ ಸೌಲಭ್ಯವುಂಟು. 

ಕೊಳ್ಳೇಗಾಲದಲ್ಲಿ ಹಿಂದೆ ಕೌಹಳ-ಗಾಲವ ಋಷಿಗಳು ವಾಸಿಸುತ್ತಿದ್ದರೆಂದೂ ಅವರಿಂದಾಗಿ ಇದಕ್ಕೆ ಕೊಳ್ಳೇಗಾಲವೆಂಬ ಹೆಸರು ಬಂತೆಂದೂ ಐತಿಹ್ಯವಿದೆ. ನಾಲ್ಕನೆಯ ಮೈಸೂರು ಯುದ್ಧಾನಂತರ ಈ ತಾಲ್ಲೂಕು ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. 1956ರ ರಾಜ್ಯಪುನರ್ವಿಂಗಡಣೆಯ ಫಲವಾಗಿ ಮೈಸೂರು ರಾಜ್ಯಕ್ಕೆ ಅದನ್ನು ಮತ್ತೆ ವರ್ಗಾಯಿಸಲಾಯಿತು. ಕೊಳ್ಳೇಗಾಲಕ್ಕೆ ಸೇರಿದ ಬಸತೀಪುರದಲ್ಲಿ ಸು. 480ರಲ್ಲಿ ಪೂಜ್ಯಪಾದನೆಂಬ ಜೈನಯತಿ ವಾಸಿಸುತ್ತಿದ್ದನೆಂದೂ ಅಲ್ಲಿ ದೊರೆತ ನಾಲ್ಕು ಜಿನವಿಗ್ರಹಗಳು ಮದ್ರಾಸಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿವೆಯೆಂದೂ ಗೊತ್ತಾಗುತ್ತದೆ. ನಿಜಗುಣಶಿವಯೋಗಿಯೂ ಮುಪ್ಪಿನ ಷಡಕ್ಷರಿಯೂ ಈ ತಾಲ್ಲೂಕಿನವರು. ನಿಜಗುಣಶಿವಯೋಗಿ ಶಂಭುಲಿಂಗನ ಬೆಟ್ಟದ ಸುತ್ತಣ ಪ್ರದೇಶದ ಅರಸನಾಗಿದ್ದು ವಿರಕ್ತನಾಗಿ ಯೋಗನಿರತನಾದನೆಂದು ತಿಳಿದು ಬರುತ್ತದೆ.

ಮಹದೇಶ್ವರನ ಬೆಟ್ಟ ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿಗೆ ನಾಡಿನ ನಾನಾ ಕಡೆಗಳಿಂದ ಯಾತ್ರಾರ್ಥಿಗಳು ಬರುತ್ತಾರೆ. ದೀಪಾವಳಿ ಮತ್ತು ಶಿವರಾತ್ರಿ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ.

1972ರ ಆಗಸ್ಟ್ ತಿಂಗಳಲ್ಲಿ ಕೊಳ್ಳೇಗಾಲದಲ್ಲಿ ಮೈಸೂರು ಜಿಲ್ಲೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿತ್ತು. 
(ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ